ನಗೀಬಿನ್, ಯೂರಿ ಮರ್ಕೋವಿಚ್
1920-ರಷ್ಯನ್ ಕಥೆಗಾರ. ಹುಟ್ಟಿದ್ದು ಮಾಸ್ಕೊ ನಗರದಲ್ಲಿ. ಬಾಲ್ಯದ ವಿದ್ಯಾಭ್ಯಾಸ ಮುಗಿದಮೇಲೆ ಚಲನ ಚಿತ್ರಕಲಾ ಅಧ್ಯಯನ ಸಂಸ್ಥೆಗೆ ಸೇರಿದ. ಆಗಲೇ ಸಾಹಿತ್ಯದತ್ತ ಒಲವು ಮೂಡಿತ್ತು. ಈತನ ಪ್ರಪ್ರಥಮ ಕಥೆ ಅಗನ್ಯೋಕ್(ಬೆಳಕು) ಪತ್ರಿಕೆಯಲ್ಲಿ 1940ರಲ್ಲಿ ಪ್ರಕಟವಾಯಿತು. 1941-43ರಲ್ಲಿ ನಡೆದ ಮಹಾಯುದ್ಧದಲ್ಲಿ ತಾನೇ ಸ್ವ ಇಚ್ಛೆಯಿಂದ ಭಾಗವಹಿಸಿದ. ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡು ಗುಣಮುಖನಾದ ಮೇಲೆ ಯುದ್ಧವಿಷಯಗಳನ್ನು ನೀಡುವ ಬಾತ್ಮೀದಾರನಾಗಿ ಹಲವಾರು ವೃತ್ತಪತ್ರಿಕೆಗಳಲ್ಲಿ ಕೆಲಸಮಾಡಿದ.

ಈತನ ಸಣ್ಣಕಥೆಗಳು ಬಹುಪ್ರಸಿದ್ಧವಾಗಿವೆ. ಸಾಮಾನ್ಯ ಸೋವಿಯತ್ ಪ್ರಜೆಗಳೇ ಈತನ ಕಥಾನಾಯಕರು-ಸಾಮೂಹಿಕ ಕೃಷಿಕ್ಷೇತ್ರದ ರೈತರು, ಹಳ್ಳಿಗರು, ಬೇಡರು, ಬೆಸ್ತರು ಇತ್ಯಾದಿ. ಮಕ್ಕಳ ಸಾಹಿತ್ಯ ರಚನೆಯಲ್ಲೂ ಈತನದು ಸಿದ್ಧಹಸ್ತ. ಸೋವಿಯತ್ ಒಕ್ಕೂಟದ ಮಕ್ಕಳಿಗೆ ಈತನ ಕಥೆಗಳೆಂದರೆ ಅಚ್ಚುಮೆಚ್ಚು. ಜೀಮ್ನಿದೂಪ್ (ಚಳಿಗಾಲದ ಓಕ್ ಮರ), ಕಮರೋಫ್, ಎಹೊ (ಪ್ರತಿಧ್ವನಿ) ಮೊದಲಾದ ಮಕ್ಕಳ ಪುಸ್ತಕಗಳು ಅತ್ಯಂತ ಜನಪ್ರಿಯವಾಗಿವೆ.
ನಗೀಬಿನ್ ಚಲನಚಿತ್ರಗಳಿಗಾಗಿ ಹಲವಾರು ಚಿತ್ರಕಥೆಗಳನ್ನು ರಚಿಸಿದ್ದಾನೆ. ಈತನ ಕಿರುಕಾದಂಬರಿ ಸ್ತ್ರನೀತ್ಸಿ ಷಿಸ್ನಿ ತ್ರೂಬ್ನಿಕೋವ (ತ್ರೂಬ್ನಿಕೋವನ ಜೀವನದ ಪುಟಗಳು: ಚಲನಚಿತ್ರವಾಗಿ ಅಪಾರ ಮನ್ನಣೆ ಗಳಿಸಿದೆ. ಈತನ ಪ್ರಸಿದ್ಧ ಕೃತಿಗಳಿವು: ಕಥಾಸಂಕಲನಗಳು: ಬಲ್ಷೋಯ್ ಸೆರ್‍ತ್ಸ್ (ದೊಡ್ಡ ಹೃದಯ, 1944); ಜಿûಮ್ನಿದೂಪ್ (1955); ರಾನ್ನಿ ವಿಸ್ನೋಯ್ (ವಸಂತದ ಆರಂಭ, 1961); ಚೀಸ್ತೀಯೆ ಪುದಿ (ತಿಳಿಗೊಳಗಳೂ, 1962). ಕಾದಂಬರಿಗಳು: ದಲಿಕೊಯ್ ಇ ಬ್ಲೀಸ್‍ಕೊಯ್ (ದೂರ ಮತ್ತು ಹತ್ತಿರ, 1965), ನಚ್ನೋಯ್ ಗೋಸ್ತ್ (ರಾತ್ರಿ ಅತಿಥಿ,1966), ಜಿûಲೋನ್ನಯ ಪಚೀತ್ಸಸ್ ಕ್ರಾಸ್ನೋಯ್ ಗಲವೊಯ್ (ಕೆಂಪು ತಲೆಯ ಹಸಿರು ಹಕ್ಕಿ,1966).						(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ